ಬಲ್ಗೇರಿಯ	
	ಆಗ್ನೇಯ ಯೂರೋಪಿನ ಒಂದು ಸ್ವತಂತ್ರ ಗಣರಾಜ್ಯ. ಅಧಿಕೃತ ಹೆಸರು ಬಲ್ಗೇರಿಯ ಜನತಾ ಗಣರಾಜ್ಯ. ಉತ್ತರದಲ್ಲಿ ರುಮೇನಿಯ, ಪೂರ್ವದಲ್ಲಿ ಕಪ್ಪು ಸಮುದ್ರ, ದಕ್ಷಿಣದಲ್ಲಿ ತುರ್ಕಿ ಮತ್ತು ಗ್ರೀಸ್, ಪಶ್ಚಿಮದಲ್ಲಿ ಯುಗೊಸ್ಲಾವಿಯ ಈ ರಾಜ್ಯವನ್ನು ಸುತ್ತುವರೆದಿವೆ. ಬಲ್ಗೇರಿಯ ಪೂರ್ವ ಪಶ್ಚಿಮವಾಗಿ 492 ಕಿಮೀ, ಉತ್ತರ ದಕ್ಷಿಣವಾಗಿ 274 ಕಿಮೀ ಅಂತರ ಉಳ್ಳದಾಗಿದ್ದು 282 ಕಿಮೀ ಸಮುದ್ರತೀರ ಪಡೆದಿವೆ. ಒಟ್ಟು ವಿಸ್ತೀರ್ಣ 1,10,912 ಚ.ಕಿಮೀ. ಜನಸಂಖ್ಯೆ 87,56000 (2000). ರಾಜಧಾನಿ ಸೋಫಿಯ 1114925.

	ಮೇಲ್ಮೈ ಲಕ್ಷಣ: ಬಲ್ಗೇರಿಯದ ಉತ್ತರದಲ್ಲಿ ಇತಿಹಾಸ ಪ್ರಸಿದ್ಧ ಡ್ಯಾನ್ಯೂಬ್ ನದಿ ಮತ್ತು ಪೂರ್ವದಲ್ಲಿ ಕಪ್ಪು ಸಮುದ್ರ ನೈಸರ್ಗಿಕ ಗಡಿಗಳಾಗಿವೆ ದೇಶದಲ್ಲಿ ಪೂರ್ವಪಶ್ಚಿಮವಾಗಿ ಬಾಲ್ಕನ್ ಮತ್ತು ನೈಋತ್ಯದಲ್ಲಿ ರಾಡಪೀ, ರೀಲ ಮತ್ತು ಪಿರಿನ್ ಪರ್ವತ ಶ್ರೇಣಿಗಳು ಹಬ್ಬಿವೆ. ಬಾಲ್ಕನ್ ಶ್ರೇಣಿಗಳು ದೇಶವನ್ನು ಹೆಚ್ಚು ಕಡಿಮೆ ಸಮವಾದ ಎರಡು ತುಂಡುಗಳಾಗಿ ವಿಂಗಡಿಸಿದರೂ ಇವು ಅಷ್ಟು ಉನ್ನತವಾಗಿಲ್ಲ. ಇವುಗಳಲ್ಲಿ ಸುಲಭವಾಗಿ ದಾಟಬಹುದಾದ ಅನೇಕ ಕಣಿವೆಗಳು ಇವೆ. ಈ ಶ್ರೇಣಿಗಳ ದಕ್ಷಿಣಕೆ ಆ್ಯಂಡಿ ಬಾಲ್ಕನ್ ಎಂಬ ಇನ್ನೊಂದು ಚಿಕ್ಕ ಶ್ರೇಣಿಯುಂಟು. ದೇಶದ ಅತ್ಯುನ್ನತ ಶಿಖರವಾದ ಮೂಸಾಲ 2, 925 ಮೀ ಎತ್ತರವಾಗಿದೆ. ಬಾಲ್ಕನ್ ಶ್ರೇಣಿಗಳ ಉತ್ತರದಲ್ಲಿರುವ ಡ್ಯಾನ್ಯೂಬ್ ನದಿಯ ದಂಡೆಯ ಪ್ರದೇಶ ಸ್ವಲ್ಪಮಟ್ಟಿಗೆ ಎತ್ತರವಾದ ಚಪ್ಪಟೆ ನೆಲ. ದಕ್ಷಿಣದಲ್ಲಿರುವ ತ್ರೇಸಿಯನ್ ಮೈದಾನ ಇದು ಮರೀಟ ನದಿಯ ಚಲೋತ್ಸಾರಣ ಪ್ರದೇಶ. ಡ್ಯಾನ್ಯೂಬ್ ಒಂದೇ ಬಲ್ಗೇರಿಯಾದ ನೌಕಾಯೋಗ್ಯ ನದಿ.

	ವಾಯುಗುಣ: ಬಲ್ಗೇರಿಯಾದ ವಾಯುಗುಣದಲ್ಲಿ ಅತಿ ಶೀತೋಷ್ಣಗಳಿಲ್ಲ. ಸರಾಸರಿ ಉಷ್ಣತೆ 13◦ಅ. ಜನವರಿಯಲ್ಲಿ ಸರಾಸರಿ 0◦ಅ ಯಿಂದ ಜುಲೈಯ 22◦ಅ ವರೆಗೆ ಉಷ್ಣತೆ ವ್ಯತ್ಯಾಸಗೊಳುತ್ತದೆ. ಉತ್ತರದ ಪರ್ವತಶ್ರೇಣಿಗಳಲ್ಲಿ ಸ್ವಲ್ಪ ಶೈತ್ಯಾಧಿಕ್ಯ ಇದೆ. ಮಳೆ ವರ್ಷಕ್ಕೆ ಸರಾಸರಿ 64 ಸೆಂಮೀ. ಇದು ಅಷ್ಟು ಸಮರ್ಪಕವಾಗಿಲ್ಲ. 

	ಸಸ್ಯಪ್ರಾಣಿ ಸಂಪತ್ತು: ಬಲ್ಗೇರಿಯದ ಈಶ್ಯಾನದಲ್ಲಿ ಡಾಬ್ರಜಾ ಪ್ರದೇಶ ಸ್ಟೆಪ್ ಹುಲ್ಲುಗಾವಲು. ಇದರಿಂದ ಮುಂದಕ್ಕೆ ಡ್ಯಾನ್ಯೂಬ್ ದಿಣ್ಣೆ ಪ್ರದೇಶದ ಹುಲ್ಲುಗಾಡು ಪ್ರದೇಶದವಿದೆ. ಈ ಪ್ರದೇಶದಲ್ಲಿ ನಡುನಡುವೆ ಇರುವ ಮರಗಳನ್ನು ಬಹುತೇಕ ಕಡಿದುಹಾಕಿ ನೆಲವನ್ನು ಸಾಗುವಳಿಗೆ ಬಳಸಲಾಗಿದೆ. ಬಾಲ್ಕನ್ ಪರ್ವತ ಪ್ರದೇಶದ ಕಡಿಮೆ ಎತ್ತರದ ನೆಲದಲ್ಲಿ ಅಗಲ ಎಲೆಯ ಮರಗಳ ಕಾಡುಗಳೂ ಹೆಚ್ಚು ಎತ್ತರದ ನೆಲದಲ್ಲಿ ಸೂಜಿಮೊನೆಯ ಶಂಕುಪರ್ಣಿ ಮರಗಳು ಇವೆ. ತ್ರೇಸ್ ಮೈದಾನದಲ್ಲಿ ಮಧ್ಯ ಅಕ್ಷಾಂಶ ಪ್ರದೇಶದ ಕಾಡು ಮೆಡಿಟರೇನಿಯನ್ ಪ್ರದೇಶದ ಸಸ್ಯವರ್ಗವೂ ಇವೆ. ಕಾಡುಗಳನ್ನು ಕಡಿದುರುವದರಿಂದ ಬಲ್ಗೇರಿಯಾದಲ್ಲಿ ವನ್ಯಮೃಗ ಸಂಪತ್ತು ಕಡಿಮೆಯಾಗಿದೆ. ಕರಡಿ, ತೋಳ, ನರಿ, ಅಳಿಲು, ಎಲ್ಕ್, ಕಾಡುಬೆಕ್ಕು, ದಂಶಕಗಳು ಇವೆ. ಕಪ್ಪು ಸಮುದ್ರ ಪ್ರದೇಶದಲ್ಲಿ ಮೀನು ಹೆಚ್ಚು ವ್ಯಾಪಕವಾಗಿಲ್ಲ. 

	ಜನಾಂಗ: ಬಲ್ಗೇರಿಯದ ಜನಸಂಖ್ಯೆಯಲ್ಲಿ ಶೇಕಡ 90ರಷ್ಟು ಜನ ನೆರೆಯ ಬಾಲ್ಕನ್ ಹಾಗೂ ರಷ್ಯನ್ ಪ್ರದೇಶದವರಂತೆ ಸ್ಲಾವಿಕ್ ಮತ್ತು ಬಲ್ಗರ್ ಮೂಲದವರು ಶೇಕಡ 6ರಷ್ಟು ತುರ್ಕಿಮೂಲದವರು ಮತ್ತು 2ರಷ್ಟು ಜಿಪ್ಸಿಗಳು ಇದ್ದಾರೆ. ಧಾರ್ಮಿಕವಾಗಿ ಸೇಕಡ 90ರಷ್ಟು ಮಂದಿ ಕ್ರೈಸ್ತರು ಮತ್ತು 8ರಷ್ಟು ಮುಸಲ್ಮಾನರು. 

	ಖನಿಜಸಂಪತ್ತು: ಬಾಲ್ಕನ್ ಶ್ರೇಣಿಯಲ್ಲಿ ಮುಖ್ಯವಾಗಿ ಲಿಗ್ನೈಟ್, ತಾಮ್ರ ಸೀಸ, ಸತು, ನಿಕ್ಷೇಪಗಳಿವೆ. ರಾಡಪೀ ಶ್ರೇಣಿಯಲ್ಲಿ ಸೀಸ, ಸತು, ಕ್ರೋಮ್‍ಮಾಲಿಬ್ಡಿನಂ, ಮ್ಯಾಗನೀಸ್ ಮತ್ತು ಬಂಗಾರದ ಗಣಿಗಳಿವೆ.
ಕೃಷಿ: ಡ್ಯಾನ್ಯೂಬ್ ನದಿ ಬಾಲ್ಕನ್ ಶ್ರೇಣಿ ನಡುವಣ ಬಯಲೇ ನಾಡಿನ ಅಂತ್ಯಂತ ಫಲವತ್ತಾದ ಭೂಮಿ. ಇಲ್ಲಿ ಗೋಧಿ, ಮೆಕ್ಕೆಜೋಳಗಳಲ್ಲದೆ ವಾಣಿಜ್ಯ ಬೆಳೆಗಳಾದ ತಂಬಾಕು, ಸಕ್ಕರೆ ಬೀಟ್, ಸೂರ್ಯಮುಖಿ ಚೆನ್ನಾಗಿ ಬೆಳೆಯುತ್ತವೆ. ಬಾಲ್ಕನ್ ಮತ್ತು ಆ್ಯಂಟಿ ಬಾಲ್ಕನ್‍ಗಳ ನಡುವಣ ಕಣಿವೆಗೆ ಗುಲಾಬಿ ಕಣಿವೆಯೆಂದೇ ಹೆಸರಿದೆ. ಅಲ್ಲಿ ಸಿದ್ಧವಾಗುವ ಗುಲಾಬಿ ಅತ್ತರ್ ಅಂತರರಾಷ್ಟ್ರೀಯ ಕ್ಯಾತಿ ಪಡೆದಿದೆ. ಬಾಲ್ಕನ್ ಶ್ರೇಣಿಯ ದಕ್ಷಿಣಕ್ಕೆ ತ್ರೇಸ್ ಬಯಲಿನಲ್ಲಿ ಹರಿಯುವ ಮರೀಟ್ಸ ನದೀ ಗಾತ್ರದಲ್ಲಿ ಡ್ಯಾನ್ಯೂಬಿಗೆ ಸರಿದೂಗದ್ದಿದರೂ ಬಲ್ಗೇರಿಯಕ್ಕೆ ಅದು ಅತಿ ಮಹತ್ತ್ವದ್ದು. ಈ ಬಯಲು ಹಣ್ಣು ಹಂಪಲು, ತರಕಾರಿ, ದ್ರಾಕ್ಷಿಗಳಿಗೆ ಹೆಸರಾಗಿದೆ. ಬತ್ತ, ಮೆಕ್ಕೆಜೋಳ, ಗೋಧಿ ಬೆಳೆಯುತ್ತವೆ. ರೈ, ಬಾರ್ಲಿ, ಬಟಾಟೆ ಮೊದಲಾದವು ಬಲ್ಗೇರಿಯದ ಇತರ ಆಹಾರ ಬೆಳೆಗಳು. 

ಆರ್ಥಿಕ ಸ್ಥಿತಿ: ಕೃಷಿ ಪ್ರಧಾನವೂ ಆಲ್ಬೇನಿಯವನ್ನು ಬಿಟ್ಟರೆ ಪೂರ್ವ ಯೂರೋಪಿನಲ್ಲೇ ಕೈಗಾರಿಕಾ ರಂಗದಲ್ಲಿ ಅತ್ಯಂತ ಹಿಂದುಳಿದದ್ದೂ ಆಗಿದ್ದ ಬಲ್ಗೇರಿಯ ಇಂದು ಆ ಪ್ರದೇಶದಲ್ಲೇ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದೆ. ಕೈಗಾರಿಕೆ, ವಾಣಿಜ್ಯ ಎರಡನ್ನೂ ಹೆಚ್ಚು ಕಡಿಮೆ ಸಂಪೂರ್ಣವಾಗಿ ರಾಷ್ಟ್ರೀಕರಿಸಲಾಗಿದೆ. ಕೃಷಿಯನ್ನು ಬಹುಪಾಲು ಸಾಮೂಹಿಕಗೊಳಿಸಲಾಗಿದೆ. ಶಕ್ತಿಯ ಕೊರತೆ ನೀಗಿಸಲು ಅನೇಕ ಜಲ ವಿದ್ಯುತ್ ಯೋಜನೆಗಳಾಗಿವೆ. ಕಲ್ಲಿದ್ದಲು, ಲಿಗ್ನೈಟ್, ಪೆಟ್ರೋಲಿಯಮ್, ನೈಸರ್ಗಿಕ ಅನಿಲಗಳ ತೀವ್ರವಾದ ಶೋಧ ಪ್ರಯತ್ನಗಳಾಗಿದೆ. ಸಮೃದ್ಧವಾದ ಖನಿಜ ನಿಕ್ಷೇಪಗಳನ್ನು ಹೊರತೆಗೆಯಲಾಗುತ್ತಿದೆ. ಇತರ ಕಮ್ಯೂನಿಸ್ಟ್ ದೇಶಗಳಂತೆ ಇಲ್ಲಿಯೂ ಮೂಲಭೂತ ಉದ್ಯಮಗಳಿಗೆ ಪಾಶಸ್ತ್ಯವಿದೆ.

	1971-75ರ ಅವಧಿಯಲ್ಲಿ ಬಲ್ಗೇರಿಯದ ಕೈಗಾರಿಕೋದ್ಯಮದ ಬೆಳೆವಣಿಗೆಯದರ ವರ್ಷಕ್ಕೆ ಸೇಕಡ 9 ಆಗಿತ್ತು. 1974ರಲ್ಲಿ ವಿದ್ಯುತ್ ಉತ್ಪಾದನೆ 2,520 ಕೋಟಿ ಕಿವ್ಯಾ ಗಂ, (ಇದರಲ್ಲಿ ಮೂರರಲ್ಲೊಂದಂಶ ಜಲವಿದ್ಯುತ್ತು) ಕಚ್ಚಾ ತೈಲ, ನೈಸರ್ಗಿಕ ಅನಿಲ, ಲಿಗ್ನೈಟ್, ಕಲ್ಲಿದ್ದಲು, ಉಕ್ಕು, ಸಿಮೆಂಟ್ ಮತ್ತು ಸಲ್ಫ್ಯೂರಿಕ್ ಆಮ್ಲ ಇವುಗಳ ಉತ್ಪಾದನೆಯಲ್ಲಿ ಪ್ರಗತಿಯುಂಟಾಯಿತು. 

	ದೇಶದ ಸೇಕಡ 43 ರಷ್ಟು ಭೂಮಿ ಕೃಷಿಗೆ ಒಳಪಟ್ಟಿದೆ. ಚಿಕ್ಕ ಹಿಡುವಳಿದಾರರೇ ಅಧಿಕವಾಗಿದ್ದ ಈ ದೇಶದಲ್ಲಿ ಕೃಷಿಯ ಸಾಮೂಹೀಕರಣದಿಂದ ಅದರ ಆಧುನೀಕರಣಕ್ಕೆ ಅನುಕೂಲವೇ ಆಗಿದೆ. ಕೃಷಿ ಯಂತ್ರಗಳ ಮತ್ತು ರಾಸಾಯನಿಕ ಗೊಬ್ಬರದ ಉತ್ಪಾದನೆ ಹೆಚ್ಚುತ್ತಿದ್ದು ಕೃಷಿಯ ಬೆಳೆವಣಿಗೆಗೆ ಪೋಷಕಗಳಾಗಿವೆ. ಆದರೂ ದಟ್ಟ ಜನಸಂಖ್ಯೆಯ ಈ ದೇಶದಲ್ಲಿ ಆಹಾರದ ಕೊರತೆ ಇದೆ.

	ಬಲೇರಿಯದ ವಿದೇಶಿ ವಾಣಿಜ್ಯದಲ್ಲಿ ಸೇಕಡ 85ರಷ್ಟು ನಡೆಯುವುದು ಸೋವಿಯೆತ್ ದೇಶ ಮತ್ತು ಇತರ ಪೂರ್ವ ಯುರೋಪಿಯನ್ ದೇಶಗಳೊಡನೆ. ಆಮದುಗಳಲ್ಲಿ ಮುಖ್ಯವಾದವು ಯಂತ್ರೋಪಕರಣ, ಕಚ್ಚಾ ಸಾಮಗ್ರಿ, ರಾಸಾಯನಿಕಗಳು, ಗಡಿಯಾರ ರೇಡಿಯೊ, ಕಾರು ಮತ್ತು ಮೋಟರ್ ಸೈಕಲ್. ಮುಖ್ಯ ರಫ್ತುಗಳು ತಂಬಾಕು, ಹಣ್ಣುಹಂಪಲು, ತರಕಾರಿ, ಜವಳಿ, ದ್ರಾಕ್ಷಾರಸ, ಅತ್ತರ್ ಮತ್ತು ಪಾದರಕ್ಷೆ.

	ನಾಣ್ಯ: ಬಲ್ಗೇರಿಯದ ನಾಣ್ಯ ಲೆಫ್ (ಬಹುವಚನ ಲೆವ). ಇದನ್ನು 100 ಸ್ಟೊಟಿಂಕಗಳಾಗಿ (ಬಹುವಚನ ಸ್ಟೊಟಿಂಕಿ) ವಿಂಗಡಿಸಲಾಗಿದೆ. 

	ಸಾರಿಗೆ: ಪ್ರಾಚೀನ ಐತಿಹಾಸಿಕ ಹೆದ್ದಾರಿಯಲ್ಲಿರುವ ಬಲ್ಗೇರಿಯದಲ್ಲಿ ಯೂಗೊಸ್ಲಾವಿಯ ಗಡಿಯಿಂದ ತುರ್ಕಿ ಗಡಿಯವರೆಗಿನ ಹೆಸರಾಂತ ರೃಲುಮಾರ್ಗವಲ್ಲದೆ ದಕ್ಷಿಣೋತ್ತರವಾಗಿಯೂ ಹಲವು ರೈಲುಮಾರ್ಗಗಳಿವೆ. 30,062 ಕಿಮೀ ರಸ್ತೆಗಳಿವೆ. ಡ್ಯಾನ್ಯೂಬ್ ನದಿ ಒಂದು ಪ್ರಮುಖ ಜಲಮಾರ್ಗ. ಯೂರೊಪಿನ ಪ್ರಧಾನ ನಗರಗಳೊಡನೆ ಈ ದೇಶ ವಿಮಾನ ಸಂಪರ್ಕ ಹೊಂದಿದೆ. 

	ಸುಂದರ ಗಿರಿಕಂದರಗಳಿಂದಲೂ ಕಪ್ಪು ಸಮುದ್ರದ ಆಕರ್ಷಕ ದಂಡೆಯಿಂದಲೂ ಕೂಡಿದ ಈ ದೇಶದಲ್ಲಿ ಪ್ರವಾಸೋದ್ಯಮ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಪ್ರಮುಖ ನಗರಗಳಾದ ಪ್ಲಾವ್‍ಡಿಫ್ (341058) ವಾರ್ನ (308432) ರೂಸೇ (170038), ಬರ್ಗಾಸ್ (195686), ಮತ್ತು ಸ್ಟಾರ ಜûಗಾರ (150518) (2001) ಇದ್ದಿತು. 

	ಇತಿಹಾಸ: ಕ್ರಿಸ್ತಶಕದ ಆದಿಯಲ್ಲಿ ರೋಮನ್ ಮತ್ತು ಅನಂತರ ಬೆಜಾಂಟೇನ್ ಸಾಮ್ರಾಜ್ಯಕ್ಕೆ ಸೇರಿದ್ದ ಈ ಪ್ರದೇಶದಲ್ಲಿ 6ನೆಯ ಶತಮಾನದಲ್ಲಿ ಸ್ಲಾವಿಕ್ ಜನಾಂಗದವರು ಪ್ರವೇಶಿಸಿ ನೆಲೆಸಿದರು, ಆದರೆ ದೇಶದ ಇಂದಿನ ಹೆಸರು ಬಂದಿದ್ದು 7ನೆಯ ಶತಮಾನದಲ್ಲಿ ವೋಲ್ಗಾತೀರದಿಂದ ಇಲ್ಲಿಗೆ ನುಗ್ಗಿಬಂದು ರಾಜ್ಯ ಕಟ್ಟಿದ ತುರ್ಕಿ ಬಲ್ಗರ್ ಜನರಿಂದ. ವಲಸೆಗಾರರಾಗಿ ಬಂದ ಬಲ್ಗರರ ಪ್ರಮಾಣ ಅಲ್ಪವಾಗಿದ್ದು ಕಾಲಾಂತರದಲ್ಲಿ ಅವರು ಬಹುಸಂಖ್ಯಾತರೊಡನೆ ಪೂರ್ತಿ ಬೆರೆತುಹೋದ್ದರಿಂದ ಆ ಜನರ ಅಸ್ತಿತ್ವದ ಕುರುಹುಗಳು ಬಲ್ಗೇರಿಯನ್ ಭಾಷೆಯಲ್ಲಿ ಉಳಿದುಕೊಂಡ ಕೆಲವೇ ಬಲ್ಗರ್ ಪದಗಳಲ್ಲಿ ಮಾತ್ರ ಕಾಣಿಸುತ್ತವೆ. 9ನೆಯ ಶತಮಾನದಲ್ಲಿ ಬಲ್ಗರ್ ದೊರೆಗಳೂ ಜನರೂ ಪೂರ್ವ ಬಿಜಾಂಟ್‍ಯಮ್ ಪೀಠದ ಅಂಕಿತದಲ್ಲಿ ಗ್ರೀಕ್ ಆರ್ತೊಡಾಕ್ಸ್ ಕ್ರೈಸ್ತ ಧರ್ಮವನ್ನು ಸ್ವೀಕರಿಸಿದ್ದರಿಂದ ಜನಾಂಗ ಮತ್ತು ಸಾಂಸ್ಕøತಿಕ ಮಿಶ್ರಣ ಪೂರ್ತಿಯಾಯಿತ್ತಲ್ಲದೆ ಅದೇ ಶಾಖೆಯ ಕ್ರೈಸ್ತ ಧರ್ಮಿಯರಾದ ರಷ್ಯನ್ ಮತ್ತು ಇತರ ನೆಲೆಯ ಸ್ಲಾವಿಕ್ ಜನಾಂಗಗಳೊಡನೆ ಸಾಂಸ್ಕøತಿಕ ಸಾಮ್ಯವೂ ಏರ್ಪಟ್ಟಿತು. 

	ಬಲ್ಗರ್ ದೊರೆಗಳು ಯುದ್ಧೋತ್ಸಾಹಿಗಳಾಗಿದ್ದರು. ಅವರ ಅತ್ಯುಚ್ಛ್ರಾಯ ಕಾಲವಾದ 10ನೆಯ ಶತಮಾನದಲ್ಲಿ ದೊರೆ ಸಿಮಿಯನ್, ಕಾರ್ಪೇತಿಯನ್ ಪರ್ವತಗಳಿಂದ ಏಡ್ರಿಯಾಟಿಕ್ ಸಮುದ್ರದ ವರೆಗೆ ಸಾಮ್ರಾಜ್ಯ ವಿಸ್ತರಣೆ ಮಾಡಿದ. ಆದರೆ ಅನಾವಶ್ಯಕ ಯುದ್ಧ ಅಂತಃಕಲಹಗಳಿಂದ ಕಾಲಾಂತರದಲ್ಲಿ ಬಲಗುಂದಿದ ಬಲ್ಗೇರಿಯವನ್ನು 14ನೆಯ ಶತಮಾನದಲ್ಲಿ ತುರ್ಕರು ಗೆದ್ದುಕೊಂಡರು. ಐದು ಶತಮಾನಗಳ ಕಾಲ ತುರ್ಕಿಯ ಆಟೊಮನ್ ಸಾಮ್ರಾಜ್ಯಕ್ಕೆ ಬಲ್ಗೇರಿಯ ಒಳಪಟ್ಟಿತ್ತು.

	ಆಟೊಮನ್ ಆಳ್ವಿಕೆಯಲ್ಲಿ ಆರ್ಥಿಕ ದೃಷ್ಟಿಯಿಂದ ಆಡಳಿತ ಒಳಿತೇ ಆಗಿದ್ದರೂ ಅವರ ದಬ್ಬಾಳಿಕೆ ಮತ್ತು ಒತ್ತಾಯದ ಮತಾಂತರದ ಧೋರಣೆಯಿಂದ ಬಲ್ಗೇರಿಯದ ಸಾಂಸ್ಕøತಿಕ ಜೇವನ ಕುಗ್ಗಿಹೋಯಿತು. ಬಲ್ಗೇರಿಯದಲ್ಲಿ ಪ್ರಥಮ ಮುದ್ರಣಾಲಯಗಳು ಸ್ಥಾಪಿತವಾದೇ 19ನೆಯ ಶತಮಾನದಲ್ಲಿ ಎಂದರೆ ಸಾಂಸ್ಕøತಿಕ ದಮನದ ತೀವ್ರತೆ ಅರ್ಥವಾದೀತು. 

	ದುರಾಡಳಿತದಿಂದ ಉದ್ದೀಪ್ತವಾದ ರಾಷ್ಟ್ರೀಯತೆಯ ಜಾಗೃತಿಯಲ್ಲಿ ಕ್ರೈಸ್ತಮಠಗಳು ಮುಖ್ಯಪಾತ್ರ ವಹಿಸಿದವು. ಆಧುನಿಕ ಬಲ್ಗೇರಿಯನ್ ಭಾಷೆಯಲ್ಲಿ ಪ್ರಥಮತಃ ಗ್ರಂಥರಚನೆ ಮಾಡಿದವನೇ ಪಾದ್ರಿ ಪೈಸಿ. ಅವನು ಬರೆದ ಸ್ಲಾವೋನಿಕ್ ಬಲ್ಗೇರಿಯನ್ ಜನರ ಇತಿಹಾಸ ರಾಷ್ಟ್ರೀಯ ಸ್ವಾಭಿಮಾನಕ್ಕೆ ತಳಪಾಯ ಹಾಕಿ ಸಾಂಸ್ಕøತಿಕ ಪುನರುಜ್ಜೀವನಕ್ಕೆ ನಾಂದಿ ಹಾಡಿತು. 951ರಲ್ಲಿ ಕಟ್ಟಿದ ರೀಲಾ ಸಂನ್ಯಾಸಿ ಕ್ರೈಸ್ತಧರ್ಮಕ್ಕೆ ಮತ್ತು ಬಲ್ಗೇರಿಯದ ಸಂಸ್ಕøತಿಗೆ ಆಶ್ರಯವಾಗಿತ್ತು. 

	ದೇಶಭಕ್ತ ಕ್ರಾಂತಿಕಾರಿಗಳು ಆಗಾಗ್ಗೆ ಬಂಡಾಯ ವೇಳುತ್ತಿದ್ದರು. 18-19ನೆಯ ಶತಮಾನಗಳಲ್ಲಿ ಬಂಡಾಯಗಳು ತೀವ್ರವಾದವು. 1876ರ ಬಂಡಾಯದಲ್ಲಿ 15,000 ದೇಶಪ್ರೇಮಿಗಳ ಕಗ್ಗೊಲೆಯಾಯಿತು ಕ್ರೈಸ್ತ ದೇವಾಲಯಗಳು ನಾಶ ಹೊಂದಿದವು. ಇವು ಅಂತರರಾಷ್ಟ್ರೀಯ ಕ್ರೋಧಕ್ಕೆ ಕಾರಣವಾದುವು. 1877ರಲ್ಲಿ ರಷ್ಯಕ್ಕೂ ತುರ್ಕಿ ಸಾಮ್ರಾಜ್ಯಕ್ಕೂ ಯುದ್ಧವಾದ ಮೇಲೆ ಮರುವರ್ಷ ಆದ ಶಾಂತಿ ಒಡಂಬಡಿಕೆಯಲ್ಲಿ ಬಲ್ಗೇರಿಯಕ್ಕೆ ಅಟೊಮನ್ ಸುಲ್ತಾನರು ಸ್ವಾಯತ್ತಾಧಿಕಾರ ಕೊಟ್ಟರು. ಅದಕ್ಕೆ ಒಬ್ಬ ಕ್ರೈಸ್ತ ಸಾಮಂತರಾಜನನ್ನು ಆರಿಸಲಾಯಿತು. 1908ರಲ್ಲಿ ತುರ್ಕಿ ಸಾಮ್ರಾಜ್ಯ ಕುಸಿದು ಬಲ್ಗೇರಿಯ ಪೂರ್ಣ ಸ್ವಾತಂತ್ರ್ಯ ಪಡೆಯಿತು.

	1914-18ರಲ್ಲಿ ನಡೆದ ಒಂದನೆಯ ಮಹಾಯುದ್ಧದಲ್ಲಿ ಬಲ್ಗೇರಿಯ ಸೋತಜರ್ಮನಿಯ ಪಕ್ಷದಲ್ಲಿದ್ದುದರಿಂದ ಅನಂತರದ ಶಾಂತಿ ಒಪ್ಪಂದದಲ್ಲಿ ದಕ್ಷಿಣದ ಇಜೀಯನ್ ಸಮುದ್ರಕ್ಕಿದ್ದ ತನ್ನ ಪ್ರದೇಶವೂ ಸೇರಿದಂತೆ ಸಾಕಷ್ಟು ಪ್ರದೇಶವನ್ನು ಕಳೆದುಕೊಂಡು ಅದು ಈಗಿನ ಗಾತ್ರಕ್ಕಿಳಿಯಿತು. ಎರಡನೆಯ ಮಹಾಯುದ್ಧದಲ್ಲಿ (1939-1945) ಬಲ್ಗೇರಿಯದ ದೊರೆ ಬೋರಿಸ್ ಮತ್ತೆ ಜರ್ಮನಿಯ ಪಕ್ಷವಹಿಸಿದ. ಆದರೆ ವಿರುದ್ಧ ಕಮ್ಯೂನಿಸ್ಟ್ ಮತ್ತು ಇತರ ಎಡಪಕ್ಷಗಳು ಪ್ರಬಲಭೂಗತ ಹೋರಾಟ ನಡೆಸಿದುವು. 1944ರ ಸೆಪ್ಟೆಂಬರ್‍ನಲ್ಲಿ ರಷ್ಯನ್ ಸೈನ್ಯಗಳು ಬಲ್ಗೇರಿಯವನ್ನು ಪ್ರವೇಶಿಸಿದವು. ಯುದ್ಧ ಮುಗಿದ ಅನಂತರ ರಾಜಸತ್ತೆಯನ್ನು ಕಿತ್ತುಹಾಕಿ, ನೆರೆಯ ಪೂರ್ವ ಯೂರೋಪಿಯನ್ ಮಾದರಿಯಲ್ಲಿ ಜನತಾ ಪ್ರಜಾರಾಜ್ಯ ಘೋಷಿಸಲಾಯಿತು.

	ಭಾಷೆ, ಸಂಸ್ಕøತಿ: ಬಲ್ಗೇರಿಯನ್ ಭಾಷೆ ನೆರೆಯ ರಷ್ಯನ್ ಮೊದಲಾದ ಸ್ಲಾನಿಕ್ ಭಾಷೆಗಳ ಕುಟುಂಬಕ್ಕೆ ಸೇರಿದ್ದು. ಅವು ಪರಸ್ಪರ ಭಾಷಿಕರಿಗೆ ಕಷ್ಟವಿಲ್ಲದೆ ಅರ್ಥವಾಗುವಷ್ಟು ಸಾಮ್ಯಹೊಂದಿವೆ.

	ಬಲ್ಗೇರಿಯನ್ ಸಂಸ್ಕøತಿ ಈಚಿನವರೆಗೆ ಅನಿವಾರ್ಯವಾಗಿ ಗ್ರಾಮೀಣವಾಗಿತ್ತು. ಅಟೊಮನ್ ಆಳ್ವಿಕೆಯಲ್ಲಿ ಸುಂದರ ಮಸೀದಿ, ಸೇತುವೆ ಮೊದಲಾದವು ನಿರ್ಮಾಣವಾದರೂ ಬಲ್ಗೇರಿಯನ್ ಸಂಸ್ಕøತಿ ಬರಡಾಗಿ ಉಳಿಯಿತು. ಆದರೆ ಅದರ ಜಾನಪದ ಸಂತೀ ತುಂಬ ಹೃದ್ಯವಾಗಿದೆ. ವಾಸ್ತುಶಿಲ್ಪ ಮತ್ತು ಚಿತ್ರಕಲೆಯಲ್ಲಿ ಧರ್ಮಸಂಬಂಧದಿಂದ ಕಾನ್‍ಸ್ಟಾಂಟಿನೋಪಲ್‍ನ ಬಿeóÁಂಟೀನ್ ಪ್ರಭಾವ ಕಂಡುಬರುತ್ತದೆ.

	ಬಲ್ಗೇರಿಯನ್ ಕಲಾಸಾಹಿತ್ಯ ಸಂಸ್ಕøತಿಗಳ ಪುನರುಜ್ಜೀವನ 19ನೆಯ ಶತಮಾನದಲ್ಲಿ ರಾಷ್ಟ್ರೀಯತೆಯ ಉತ್ಸಾಹದೊಡನೆಯೇ ಅದ್ದು. ಈ ಕಾಲದ ವಾಸ್ತು ಚಿತ್ರ ಮತ್ತು ನೇಯ್ಗೆ ಕಲೆಗಳ ಶ್ರೇಷ್ಠ ಮಾದರಿಗಳನ್ನು ಸರ್ಕಾರ ಹಲವು ಎಡೆಗಳಲ್ಲಿ ರಕ್ಷಿಸಿಟ್ಟಿದೆ.

	ಇಂದಿನ ಬಲ್ಗೇರಿಯನ್ ಕಲೆ ಸಾಹಿತ್ಯಗಳ ಮೇಲೆ ಸೋವಿಯತ್ ಪ್ರಭಾವ ಬಲವಾಗಿದೆ. ಸಾಹಿತ್ಯದಲ್ಲಿ ರೈತ, ಕಾರ್ಮಿಕ ಮೊದಲಾದವರ ಬಾಳನ್ನು ಚಿತ್ರಿಸುವ ಸಮಾಜವಾದಿ ವಾಸ್ತವವಾದಕ್ಕೆ ಅಧಿಕಾರಸ್ಥರ ಆಶೀರ್ವಾದವಿದೆ.

	ಸಂಗೀತದಲ್ಲಿ ಬಲ್ಗೇರಿಯನ್ನರು ಎಂದಿನಿಂದಲೂ ವಿಚಕ್ಷಣರು. ಪ್ರಸ್ತುತ ಸರ್ಕಾರ ಈ ರಂಗದಲ್ಲಿ ತರಬೇತು ಕೊಡಲು ಏರ್ಪಾಟು ಮಾಡಿದೆ. ರಾಜಧಾನಿಯೊಂದರಲ್ಲೇ ಐದು ಒಪೆರಾ ಸಂಸ್ಥೆಗಳಿವೆ. ಇಂದಿನ ಜಗತ್ಪ್ರಸಿದ್ಧ ಬಲ್ಗೇರಿಯನ್ ಗಾಯಕರ ಪೈಕಿ ಬೋರೀಸ್ ಕ್ರಿಸ್ತಾವ್ ಮತ್ತು ನಿಕೋಲಾಯ್ ಗುಯವರೋವ್ ಪ್ರಮುಖರು.

	ಅನೇಕ ಪುರಾತನ ಪಟ್ಟಣಗಳಲ್ಲಿರುವ ಪ್ರಾಚೀನ ವಾಸ್ತುಶಿಲ್ಪ, ಮೂರ್ತಿಶಿಲ್ಪ, ಚಿತ್ರ ಮುಂತಾದ ಕಲೆಗಳ ವಸ್ತು ಪ್ರದರ್ಶನಾಲಯಗಳು ಹಂಗೇರಿಯನ್ನರ ಸ್ವಾಭಿಮಾನವನ್ನು ನೆನಪುಮಾಡಿಕೊಡುತ್ತವೆ.

	ಆಡಳಿತ: ಬಲ್ಗೇರಿಯ ಜನತಾ ಗಣರಾಜ್ಯವಾಗಿದೆ. 1947ರಲ್ಲಿ ಜಾರಿಗೆ ಬಂದ ಸಂವಿಧಾನದ ಪ್ರಕಾರ ಆಡಳಿತ ನಡೆಯುತ್ತಿದೆ. ನಾಲ್ಕು ವರ್ಷಗಳಿಗೊಮ್ಮೆ ಸಾರ್ವತ್ರಿಕ ವಯಸ್ಕ ಗುಪ್ತ ಮತದಾನದಿಂದ ಆಯ್ಕೆಯಾಗುವ ಸದಸ್ಯರನ್ನೊಳಗೊಂಡ ಏಕಸದನ ರಾಷ್ಟ್ರೀಯ ಸಭೆ (ನುರೋದ್ಯೊ ಸೊಬ್ರಾನಿ) ಅತ್ಯುಚ್ಚ ವಿಧಾನ ಸಂಸ್ಥೆ. ಇದಕ್ಕೆ ಪ್ರತಿ 20,000 ಜನಕ್ಕೆ ಒಬ್ಬನಂತೆ ಸದಸ್ಯರ ಆಯ್ಕೆಯಾಗುತ್ತದೆ. ವರ್ಷಕ್ಕೆ ಕನಿಷ್ಠ ಎರಡು ಬಾರಿ ಇದು ಸಮಾವೇಶಗೊಳ್ಳುತ್ತದೆ. ಇದೇ ಅಧ್ಯಕ್ಷಕೀಯ ಮಂಡಲಿಯನ್ನು ಆಯ್ಕೆಮಾಡುತ್ತದೆ. ಇದರಲ್ಲಿ ಒಬ್ಬ ಅಧ್ಯಕ್ಷ, ಇಬ್ಬರು ಉಪಾಧ್ಯಕ್ಷರು, ಒಬ್ಬ ಕಾರ್ಯದರ್ಶಿ ಮತ್ತು 15 ಸದಸ್ಯರಿರುತ್ತಾರೆ. ವಿಧಾನ ಸಭೇಯ ಅಧಿವೇಶನ ಇಲ್ಲದಾಗ ಅಧ್ಯಕ್ಷೀಯ ಮಂಡಲಿಗೆ ಪರಮೋಚ್ಚ ವಿಧಾನಾಧಿಕಾರ ಇರುತ್ತದೆ. ಒಬ್ಬ ಪ್ರಧಾನಿ ಹಾಗೂ ಮಂತ್ರಿಮಂಡಲವನ್ನೂ ರಾಷ್ಟ್ರೀಯ ಸಭೆಯೇ ಆರಿಸುತ್ತದೆ.

	ಆಡಳಿತದ ನಿಜವಾದ ನಿಯಂತ್ರಣ ಕಮ್ಯುನಿಷ್ಟ್ ಪಕ್ಷದ ಕೈಲಿದೆ. ಆದರೆ ಅದು ಏಕಮಾತ್ರ ರಾಜಕೀಯ ಪಕ್ಷವಲ್ಲ. ಎರಡನೆಯದಾದ ಗ್ರಾಮಾಂತರ ಪಕ್ಷ ಮತ್ತು ಇನ್ನೆರಡು ಪಕ್ಷಗಳು ಇವೆ. ಇವೆಲ್ಲ ಸೇರಿ ಚುನಾವಣೆಗಳಿಗೆ ಉಮೇದುವಾರರ ಪಟ್ಟಿಯನ್ನು ಸಿದ್ಧಗೊಳಿಸುತ್ತವೆ. ಆ ಪಟ್ವಿಯಿಂದಲೇ ಸಂಸತ್ ಸದಸ್ಯರನ್ನು ಆರಿಸಬೇಕು.	(ಪಿ.ಎ.ಎ.)
ಶಿಕ್ಷಣ ಪದ್ಧತಿ: ಯೂರೋಪಿನ ಕಮ್ಯುನಿಸ್ಟ್ ರಾಷ್ಟ್ರವಾದ ಬಲ್ಗೇರಿಯದ ಶಿಕ್ಷಣ ಹಲವಾರು ದೃಷ್ಟಿಗಳಿಂದ ಗಮನಾರ್ಹವೆನಿಸುತ್ತದೆ. ಒಟ್ಟು 20 ಲಕ್ಷ ವಿದ್ಯಾರ್ಥಿಗಳಿಗೆ ವಿವಿಧ ಮಟ್ಟದಲ್ಲಿ ದೊರಕುತ್ತಿರುವ ಶಿಕ್ಷಣ ಉಚಿತ; ಎಲ್ಲ ಮಟ್ಟದ ಎಲ್ಲ ವಿಧದ ಎಲ್ಲ ಶಿಕ್ಷಣ ಸಂಸ್ಥೆಗಳೂ ಸರ್ಕಾರದವು; ಖಾಸಗಿ ಅಥವಾ ಸ್ವತಂತ್ರ ಶಿಕ್ಷಣ ಸಂಸ್ಥೆಗಳಿಗೆ ಅವಕಾಶವೇ ಇಲ್ಲ. ಯಾವ ಹಂತದ ಶಿಕ್ಷಣವೇ ಆಗಲಿ ಅದು ಸಾಮಾನ್ಯ ಶಿಕ್ಷಣವಾದರೂ ಔದ್ಯೋಗಿಕ ಶಿಕ್ಷಣಕ್ಕೆ ಅವಕಾಶ ಕಲ್ಪಿಸಬೇಕು. ಪ್ರಾಥಮಿಕ ಪೂರ್ವದಲ್ಲಿ ಇದು ಆಟದ ರೂಪದ್ದಾದರೂ ಒಂದು ರೀತಿಯ ಉತ್ಪನ್ನದ ಕಡೆ ವಾಲಿರುತ್ತದೆ; ಪ್ರಾಥಮಿಕ ಶಾಲೆಗಳಿಗೆ ಪಾಲಿಟೆಕ್ನಿಕ್ ಎಲಿಮೆಂಟರಿ ಶಾಲೆಗಳೆಂಬ ಹೆಸರೇ ಉಂಟು. ಪ್ರೌಢಶಾಲಾ ಹಂತದಲ್ಲಿ ಇದು ತಾಂತ್ರಿಕ ಶಿಕ್ಷಣದ ಸ್ವರೂಪ ತಾಳುತ್ತದೆ. ಎಲ್ಲ ಹಂತಗಳಲ್ಲೂ ಕಮ್ಯೂನಿಸ್ಟ್ ತತ್ತ್ವದೃಷ್ಟಿಯ ಬೋಧನೆಯೂ ಸೇರಿದ್ದು ಹಂತ ಹಂತಕ್ಕೂ ಬೋಧನವಿಷಯ ಜಟಿಲವಾಗುತ್ತ ಹೋಗುತ್ತದೆ.
ಬಲ್ಗೇರಿಯದಲ್ಲಿ ಶಿಕ್ಷಣ ಪ್ರಾಥಮಿಕ, ಪ್ರೌಢ ಮತ್ತು ಉನ್ನತ-ಈ ಮೂರು ಅಂತಸ್ತುಗಳಲ್ಲಿದೆ. ವಿಶ್ವವಿದ್ಯಾಲಯದ ಪೂರ್ವದ ಶಿಕ್ಷಣ ಎಂದರೆ ಶಾಲಾಶಿಕ್ಷಣ ಒಟ್ಟು 11 ವರ್ಷದ್ದು. ಆದರೆ ಅದನ್ನು ಪ್ರಾಥಮಿಕ ಮತ್ತು ಪ್ರೌಢ ಹಂತಗಳಲ್ಲಿ ಹಂಚುವುದರಲ್ಲಿ ಸ್ಥಳೀಯ ಅವಶ್ಯಕತೆ, ಸನ್ನಿವೇಶ, ಸೌಲಭ್ಯಾದಿಗಳನ್ನು ಅನುಸರಿಸಿ ವೈವಿಧ್ಯ ಕಾಣಿಸಿಕೊಳ್ಳುವುದುಂಟು. ಕೆಲವು ಕಡೆ 4 ವರ್ಷದ ಕಿರಿಯ ಪ್ರಾಥಮಿಕ ಶಾಲೆ, 4 ವರ್ಷದ ಹಿರಿಯ ಪ್ರಾಥಮಿಕ ಶಾಲೆ, ಮತ್ತು 3 ವರ್ಷದ ಪ್ರೌಢಶಾಲೆ- ಈ ರೀತಿ ವ್ಯವಸ್ಥೆಯಾಗಿದ್ದರೆ ಇನ್ನು ಕೆಲವು ಕಡೆ ಒಂದೇ ವ್ಯಾಪಕ ರೀತಿಯ ಶಾಲಾ ವ್ಯವಸ್ಥೆ ಇದ್ದು ಅದು 11 ತರಗತಿಗಳನ್ನು ಎಂದರೆ ಪ್ರಾಥಮಿಕ ಮತ್ತು ಪ್ರೌಢಶಾಲಾ ತರಗತಿಗಳನ್ನೆಲ್ಲ ಹೊಂದಿರುತ್ತದೆ; ಮತ್ತೆ ಕೆಲವು ಕಡೆ 8 ವರ್ಷದ ಪ್ರಾಥಮಿಕ ಶಾಲೆಯೂ 3 ವರ್ಷದ ಪ್ರೌಢಶಾಲೆಯೂ ಇರುವುದುಂಟು. ಯಾವ ಮಟ್ಟದ ಶಾಲೆಯೆ ಆಗಲಿ ಸಾಮಾನ್ಯ ಶಿಕ್ಷಣದ ಜೊತೆಗೆ ದುಡಿಮೆಯ ಕಾರ್ಯವನ್ನೂ ಒಳಗೊಂಡಿರಬೇಕೆಂಬ ನಿಯಮವುಂಟು. ಆದ್ದರಿಂದಲೆ ಅವೆಲ್ಲವನ್ನೂ ಪಾಲಿಟೆಕ್ನಿಕ್ ಶಾಲೆಗಳೆಂದೇ ಕರೆಯುವರು.
7 ರಿಂದ 15 ವರ್ಷದ ಮಕ್ಕಳಲ್ಲಿ ಕಡ್ಡಾಯ ಶಿಕ್ಷಣದ ಕಾನೂನಿನ ಪರಿಮಿತಿಗೆ ಬರುತ್ತಾರೆ. ಅವರೆಲ್ಲರಿಗೂ ಅಗತ್ಯ ಶಾಲಾಸೌಲಭ್ಯವನ್ನು ಸರ್ಕಾರ ಒದಗಿಸಿದೆ. ಆದರೆ ಪ್ರೌಢ ಮತ್ತು ಉನ್ನತ ಶಿಕ್ಷಣಕ್ಕೆ ಪ್ರವೇಶ ಪರೀಕ್ಷೆಗಳು ಕಠಿಣವಾಗಿದ್ದು ಕೇವಲ ಕೆಲವೇ ಮಂದಿಗೆ ಮಾತ್ರ ಅವಕಾಶ ಸಿಕ್ಕುವಂತಿದೆ. ಉನ್ನತ ಶಿಕ್ಷಣ ಸರ್ಕಾರದ (ರಾಷ್ಟ್ರೀಯ) ಸೋಫಿಯ ವಿಶ್ವವಿದ್ಯಾಲಯದಲ್ಲೂ ಇತರ ಅನೇಕ ಉನ್ನತ ವಿದ್ಯಾಲಯಗಳಲ್ಲೂ ಏರ್ಪಟ್ಟಿದೆ. ಪದವಿ ಶಿಕ್ಷಣ 4 ವರ್ಷ (ನ್ಯಾಯಶಾಸ್ತ್ರ)ದಿಂದ ಹಿಡಿದು 6 ವರ್ಷಗಳ (ವೈದ್ಯಶಾಸ್ತ್ರ)ಗಳವರೆಗೆ ಹರಡಿರುತ್ತದೆ.

ಅನೇಕ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಸೇರಿದಂತೆ ವಿದ್ಯಾರ್ಥಿನಿಲಯಗಳಿವೆ. ದೂರದಿಂದ ಬರತಕ್ಕ ವಿದ್ಯಾರ್ಥಿಗಳು ಅಥವಾ ತಮ್ಮ ಮಾತಾಪಿತೃಗಳೊಡನೆ ಕಾರಣಾಂತರದಿಂದ ಇರಲಾರದವರು ಅಲ್ಲಿ ವಾಸಿಸುವರು. ಕೆಲಸಕ್ಕೆ ಹೋಗತಕ್ಕ ಪೋಷಕರ ಮಕ್ಕಳಿಗಾಗಿ ಕೆಲವೆಡೆ ದಿನವಿಡೀ ಶಾಲೆ ನಡೆಯುತ್ತವೆ. ಅಂಥ ಶಾಲೆಗಳಲ್ಲಿ ಒಂದೊಂದು ತರಗತಿಯವರೂ ಪಾಠ ಮುಗಿದ ಮೇಲೆ ಒಟ್ಟಿಗೆ ಆಟ, ಪ್ರವಾಸ, ಮನೋರಂಜನೆ, ಮನೆಗೆಲಸ, ಕಂಠಪಾಠ ಮುಂತಾದ ಕಾರ್ಯಕ್ರಮಗಳಲ್ಲಿ ನಿರತರಾಗಿರುತ್ತಾರೆ. ಕೆಲಸಕ್ಕೆ ಸೇರಿಕೊಂಡಿರುವ ವಯಸ್ಕ ಜನತೆಗಾಗಿ ಜಡೋನ್ನ ಎಂಬ ಶಿಕ್ಷಣ ವಿಸ್ತರಣ ಸೇವಾವ್ಯವಸ್ಥೆಯೂ ಉಂಟು. ಅವರು ಖಾಸಗಿಯಾಗಿ ಅಥವಾ ಇತರ ವಿಧಗಳಿಂದ ವ್ಯಾಸಂಗ ಮಾಡಿಕೊಂಡು ವಿಶ್ವವಿದ್ಯಾಲಯದ ಅಥವಾ ಇತರ ಸಂಸ್ಥೆಗಳ ಪರೀಕ್ಷೆಗೆ ಕೂಡಬಹುದು. ಈ ವ್ಯವಸ್ಥೆ ಸಾಮಾನ್ಯ ವಿಷಯಗಳಂತೆ ತಾಂತ್ರಿಕ ವಿಷಯಗಳಿಗೂ ಅನ್ವಯಿಸುತ್ತದೆ.

	ಸೋಫಿಯ ವಿಶ್ವವಿದ್ಯಾಲಯ, ಪ್ರಾಥಮಿಕ ಶಾಲಾ ಶಿಕ್ಷಕರ ಪ್ರತಿಶಿಕ್ಷಣ ಸಂಸ್ಥೆ ಅಧ್ಯಾಪಕರ ವೃತ್ತಿನೈಪುಣ್ಯವನ್ನು ಹೆಚ್ಚಿಸುವ ಸಂಸ್ಥೆ-ಇವು ಮೂರೂ ಅಧ್ಯಾಪಕ ಪ್ರತಿಶಿಕ್ಷಣ ಕಾರ್ಯವನ್ನು ನಿರ್ವಹಿಸುತ್ತವೆ. ಬಲ್ಗೇರಿಯ ವಿಶ್ವವಿದ್ಯಾಲಯ ಹಿಂದೆ ಪ್ರೌಢಶಾಲಾ ಅಧ್ಯಾಪಕರಿಗೆ ಮಾತ್ರ ಶಿಕ್ಷಣವೀಯುತ್ತಿತ್ತು. ಪ್ರೌಢಶಾಲಾ ಶಿಕ್ಷಣ ಮುಗಿಸಿದ ಅಭ್ಯರ್ಥಿಗಳು ನಾಲ್ಕು ವರ್ಷದ ಈ ಪ್ರಶಿಕ್ಷಣದಿಂದ ಪ್ರೌಢಶಾಲೆಗೆ ಅಧ್ಯಾಪಕರಾಗುವ ಅರ್ಹತೆ ಪಡೆಯುತ್ತಾರೆ. ಅವರಿಗೆ ಸ್ವಲ್ಪ ಮಟ್ಟಿನ ವೃತ್ತಿಶಿಕ್ಷಣ ದೊರೆತರೂ ವ್ಯಾಸಂಗ ವಿಷಯ (ಕನ್ವೆಂಟ್ಸ್)ಗಳಲ್ಲಿ ಆಳವಾದ ಶಿಕ್ಷಣ ದೊರೆಯುತ್ತದೆ. ವಿಶ್ವವಿದ್ಯಾಲಯ ಈಚೆಗೆ ಪ್ರಾಥಮಿಕ ಶಾಲಾ ಅಧ್ಯಾಪಕರ ಪ್ರಶಿಕ್ಷಣದ ಕಡೆಗೂ ಗಮನಕೊಡುತ್ತಿದೆ. ಪ್ರೌಢಶಾಲಾ ಶಿಕ್ಷಣ ಮುಗಿಸಿದ ಅಭ್ಯರ್ಥಿಗಳು ಪ್ರಾಥಮಿಕ ಶಾಲಾ ಅಧ್ಯಾಪಕರ ಪ್ರಶಿಕ್ಷಣ ಸಂಸ್ಥೆಯಲ್ಲಿ ಎರಡು ವರ್ಷದ ಶಿಕ್ಷಣ ಪಡೆಯುತ್ತಾರೆ. ಅಧ್ಯಾಪಕರ ನೈಪುಣ್ಯವನ್ನು ಹೆಚ್ಚಿಸುವ ಸಂಸ್ಥೆ ವೃತ್ತಿನಿರತ ಶಿಕ್ಷಣ, ತಕ್ಕಷ್ಟು ಪ್ರಶಿಕ್ಷಣ ಪಡೆಯದವರ ಶಿಕ್ಷಣ, ನವೀಕರಣ ಶಿಕ್ಷಣ-ಈ ರೀತಿಯ ಸೇವಾವ್ಯವಸ್ಥೆಯನ್ನು ಹೊಂದಿದೆ.

	ಅಧ್ಯಾಪಕರಿಗೆ ವೃತ್ತಿಶಿಕ್ಷಣ ಉಚಿತ; ಹಾಗೆ ಶಿಕ್ಷಣ ಪಡೆದ ಅಧ್ಯಾಪಕರು ತಮಗೆ ನಿಯೋಜಿಸುವ ಸ್ಥಳಕ್ಕೆ ಹೋಗಿ 3 ವರ್ಷ ಕಡ್ಡಾಯ ಸೇವೆ ಸಲ್ಲಿಸಬೇಕು. ಅನಂತರ ಅವರು ತಮಗನುಕೂಲವೆನಿಸುವ ಸ್ಥಳದಲ್ಲಿ ಕೆಲಸಕ್ಕೆ ಸೇರಿಕೊಳ್ಳಬಹುದು.

	1959ರ ಮೂಲ ಶಾಸನದ ಪ್ರಕಾರ ಸಾಮಾಜಿಕ ಹಾಗೂ ಉತ್ಪನ್ನದಾಯಕ ಶ್ರಮಜೀವನಕ್ಕೆ ಹೊಂದಿಕೊಳ್ಳುವಂತೆ ತರುಣಪೀಳಿಗೆಯನ್ನು ಸಮಾಜವಾದದ ಕಮ್ಯುನಿಷ್ಟ್ ಜನಜೀವನಕ್ಕೆ ಸಿದ್ಧಪಡಿಸುವುದೇ ಇಲ್ಲಿನ ಶಿಕ್ಷಣದ ಉದ್ದೇಶ. ಈ ಉದ್ದೇಶವನ್ನು ಶಿಶುವಿಹಾರಗಳಿಂದ ವಿಶ್ವವಿದ್ಯಾಲಯದವರೆಗಿನ ಎಲ್ಲ ಶಿಕ್ಷಣ ಸಂಸ್ಥೆಗಳೂ, ಸಾಮಾನ್ಯ ಶಿಕ್ಷಣದಂತೆ, ಉದ್ಯೋಗ ಮತ್ತು ತಾತ್ತ್ವಿಕ ಶಿಕ್ಷಣ ಸಂಸ್ಥೆಗಳೂ ಸಾಧಿಸಲು ಅನುಕೂಲಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಅವುಗಳಲ್ಲಿ ತಾತ್ವಿಕ ಪ್ರಚಾರದ ವಿಷಯ ಹಂತ ಹಂತಕ್ಕೂ ವಿಸ್ತರಿಸುತ್ತ ಹೋಗುತ್ತದೆ.

	ಸಾಮಾನ್ಯ ಶಿಕ್ಷಣದ ಪಠ್ಯಕ್ರಮದಲ್ಲಿ ಓದುಬರಹ, ಲೆಕ್ಕಾಚಾರ, ಸಾಹಿತ್ಯಸಮಾಜ ಶಾಸ್ತ್ರ, ಸಂಗೀತ ಇವು ಸೇರಿರುತ್ತವೆ. ಪಾಲಿಟೆಕ್ನಿಕ್ ಪ್ರಾಥಮಿಕ ಮತ್ತು ಪ್ರೌಢಶಾಲಾ ಪಠ್ಯಕ್ರಮದಲ್ಲೂ ಇವು ಸೇರಿರುತ್ತವೆ. ಶ್ರಮಜೀವನಕ್ಕೆ ಸಂಬಂಧಿಸಿದ ಶಿಕ್ಷಣ ಪ್ರೌಢಶಾಲೆಯಲ್ಲೂ ಉನ್ನತ ಶಿಕ್ಷಣದಲ್ಲೂ ದೊರೆಯುತ್ತದೆ. ಪ್ರಾಥಮಿಕ ಶಾಲೆಯಲ್ಲಿ ಪಾದರಕ್ಷೆಗೆ ಲೇಸು ಕಟ್ಟುವುದು, ಕೆಲಸದ ಅನಂತರ ಶಾಲೆಯ ಸ್ಥಳ ಚೊಕ್ಕಟ ಮಾಡುವುದು, ಹೂಗಿಡ ನೆಡುವುದು-ಮುಂತಾದ ಕೆಲಸಗಳನ್ನು ಕಲಿಸುತ್ತಾರೆ. 5ನೆಯ ತರಗತಿಯ ಅನಂತರ ಪ್ರೌಢಶಾಲೆಯ ತರಗತಿಗಳಲ್ಲಿ ವ್ಯವಸಾಯ, ಉದ್ಯೋಗ ಮುಂತಾದ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸಗಳ ಅನುಭವವನ್ನು ಬೆಳೆಸುತ್ತಾರೆ. ತಾಂತ್ರಿಕ ಶಾಲೆಗಳಲ್ಲೂ ಉನ್ನತ ವೃತ್ತಿಶಿಕ್ಷಣ ಸಂಸ್ಥೆಗಳಲ್ಲೂ ವಿದ್ಯಾರ್ಥಿಗಳ ಆಸಕ್ತಿ ಅಭಿರುಚಿಗಳಿಗೆ ಹೊಂದುವಂಥ ವೃತ್ತಿಶಿಕ್ಷಣವೀಯಲಾಗುತ್ತದೆ. ತಾತ್ತ್ವಿಕ ಶಿಕ್ಷಣದಲ್ಲಿ ಮಾಕ್ರ್ಸ್-ಲೆನಿನ್ನರ ಜೀವನ ಮತ್ತು ತತ್ವದೃಷ್ಟಿಯನ್ನು ಬೋಧಿಸಲಾಗುತ್ತದೆ.

	ಶಿಕ್ಷಣದ ಆಡಳಿತ ಪೂರ್ಣವಾಗಿ ಕೇಂದ್ರೀಕೃತ. ಅದು ಶಿಕ್ಷಣ ಸಚಿವರ ಆಡಳಿತಕ್ಕೆ ಸೇರಿದೆ. ಅವರು ರಾಷ್ಟ್ರದ ನ್ಯಾಷನಲ್ ಅಸೆಂಬ್ಲಿಯ ಹಾಗೂ ಕಮ್ಯುನಿಸ್ಟ್ ಪಕ್ಷದ ಕೇಂದ್ರ ಸಮಿತಿಯ ಸದಸ್ಯರು. ಆದ್ದರಿಂದ ಶಾಲೆಯ ಆಡಳಿತ ಕಮ್ಯುನಿಸ್ಟ್‍ಪಕ್ಷಕ್ಕೆ ಸಂಬಂಧಿಸಿದಂತಾಗಿದೆ. ಪಕ್ಷದ ನೀತಿಯನ್ನನುಸರಿಸಿ ಶಿಕ್ಷಣದ ತತ್ತ್ವದೃಷ್ಟಿ, ಶಾಲೆಯ ವ್ಯವಸ್ಥೆ, ತಕ್ಷಣದ ಅಂಗರಚನೆ ಶಿಕ್ಷಣದ ಉದ್ದೇಶ, ಬೋಧನಕ್ರಮ, ಪಠ್ಯವಿಷಯ, ಪಠ್ಯಪುಸ್ತಕ ಮುಂತಾದ ಅಂಶಗಳನ್ನೆಲ್ಲ ಸಚಿವಾಲಯವೇ ನಿರ್ಧರಿಸುತ್ತದೆ. ತನ್ನ ತನಿಖಾಧಿಕಾರಿಗಳ ಸಹಾಯದಿಂದ ಸಚಿವಾಲಯ ಅವ್ಯವಸ್ಥೆಯ ಮೂಲಕ ಉದ್ದೇಶಿಸಿದ ಗುರಿಮುಟ್ಟಿರುವ ಅಂಶವನ್ನು ಪರೀಕ್ಷಿಸಿ ಯುಕ್ತ ಕ್ರಮ ಕೈಗೊಳ್ಳುತ್ತದೆ. ಬಹುಮಟ್ಟಿಗೆ ಶಿಕ್ಷಣದ ಆಡಳಿತ ರಾಜಕೀಯ ಆಡಳಿತವನ್ನು ಅನುಸರಿಸಿಯೇ ರೂಪುಗೊಂಡಿದೆ.

	ಶಿಕ್ಷಣಕ್ಕೆ ವಿವಿಧ ಮೂಲಗಳಿಂದ ಹಣ ದೊರಕಿಸಿಕೊಳ್ಳಲಾಗುತ್ತಿದೆ. ಉನ್ನತ ಶಿಕ್ಷಣ ಮತ್ತು ಅಧ್ಯಾಪಕರ ಪ್ರಶಿಕ್ಷಣ-ಇವಕ್ಕೆ ನೇರವಾಗಿ ಕೇಂದ್ರಸಚಿವಾಲಯ ಹಣ ಒದಗಿಸುತ್ತದೆ. ಔದ್ಯೋಗಿಕ ಮತ್ತು ಕೃಷಿ ವಿಶ್ವವಿದ್ಯಾಲಯಗಳು ಅವನ್ನು ನಡೆಸುವ ಇತರ ಸಚಿವಾಲಯಗಳಿಂದ ಒದಗಿಸಿಕೊಳ್ಳುತ್ತವೆ. ಬಾಲವಾಡಿ, ಶಿಶುವಿಹಾರ ಕಿಂಡರ್‍ಗಾರ್ಟ್‍ನ್ ಮುಂತಾದವನ್ನು ಸಾಮಾನ್ಯವಾಗಿ ಕೆಲಸಕ್ಕೆ ಹೋಗುವ ಪೋಷಕರ ಮಕ್ಕಳಿಗಾಗಿ ಆಯಾ ಉದ್ಯೋಗಗಳೇ ಏರ್ಪಡಿಸಿರುವುದರಿಂದ ಅವುಗಳ ವೆಚ್ಚವನ್ನೂ ಅವೇ ವಹಿಸಿಕೊಳ್ಳುತ್ತವೆ. ಕೇವಲ ಶಿಕ್ಷಣ ದೃಷ್ಟಿಯಿಂದಲೇ ಏರ್ಪಟ್ಟಿರುವ ಆ ಮಟ್ಟದ ಶಾಲೆಗಳಿಗೆ ಕೇಂದ್ರ ಸಚಿವಾಲಯವೂ ಅವು ಇರತಕ್ಕ ಪ್ರಾಂತಿಯ ಆಡಳಿತವೂ ಹಣ ಒದಗಿಸುತ್ತವೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಂಸ್ಥೆಗಳನ್ನು ಆಯಾ ಜಿಲ್ಲೆಗೆ ಒದಗಿಸಿರುವ ಸಹಾಯ ಧನದಿಂದ ನಡೆಸಲಾಗುತ್ತಿದೆ.

	ಬೋಧನ ವಿಷಯ ಹಾಗೂ ಉದ್ದೇಶಗಳನ್ನು ಅನುಸರಿಸಿ ಯುಕ್ತ ರೀತಿಯ ಬೋಧನ ಕ್ರಮಗಳನ್ನು ಕೇಂದ್ರ ಸಚಿವಾಲಯವೇ ನಿರ್ಧರಿಸುತ್ತದೆ. ಸಾಮಾನ್ಯ ಉಪನ್ಯಾಸ ಕ್ರಮ ಎಲ್ಲ ಹಂತಗಳಲ್ಲೂ ಬಳಕೆಯಲ್ಲಿವೆ. ಚರ್ಚೆ, ಪ್ರಶ್ನೋತ್ತರ ಕಾರ್ಯಕ್ರಮ, ಪಠ್ಯಪುಸ್ತಕದ ಕ್ರಮ-ಇವೂ ಪ್ರಚಾರದಲ್ಲಿದೆ. ಕಂಠಪಾಠ ಮಾಡಿಸಿ ಅನೇಕ ವಿಷಯಗಳನ್ನು ಕಲಿಸುವುದೂ ಕಂಡುಬರುತ್ತದೆ. ಸಾಮಾನ್ಯ ವಿಷಯಗಳನ್ನು ಕುರಿತು ವಿಚಾರ ಗೋಷ್ಠಿಗಳನ್ನು ಏರ್ಪಡಿಸಿದರೂ ಅಲ್ಲಿ ನಡೆವ ವಿವೇಚನೆ ಚರ್ಚೆ ರಾಷ್ಟ್ರದ ಅಧಿಕೃತ ತತ್ತ್ವದೃಷ್ಟಿಗೆ ಅನುಗುಣವಾಗಿರುತ್ತದೆ.		
(ಎನ್.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ